ಬಿಸಿತೂನ್ -
ಪಶ್ಚಿಮ ಇರಾನಿನ ಒಂದು ಭಗ್ನ ನಗರ. ಪ್ರಾಚೀನ ಬೇಹಿಸ್ತೂನ್, ಇದನ್ನು ಬೀಸತೂನ್ ಎಂದೂ ಕರೆಯುತ್ತಾರೆ. ಇದು ಲಾರೆಸ್ತಾನ್ ಪ್ರಾಂತ್ಯದಲ್ಲಿ ಕೆರ್ಮಾನ್ ಷಾಹನ ಪೂರ್ವಕ್ಕೆ 35ಕಿಮೀ ದೂರದಲ್ಲಿ ಜಾಗ್ರೋಸ್ ಪರ್ವತದ ಬುಡದಲ್ಲಿ ಸಣ್ಣಕಲ್ಲು ಗುಡ್ಡವೊಂದರ ಅಂಚಿನಲ್ಲಿದೆ. ಪ್ರಾಚೀನ ಕಾಲದಲ್ಲಿ ಇದು ಮೀಡಿಯದ ರಾಜಧಾನಿ ಎಕ್ಬಾಟನದಿಂದ ಬ್ಯಾಬಿಲಾನಿಗೆ ಹೋಗುವ ಹೆದ್ದಾರಿಯ ಮೇಲಿತ್ತು. ಈ ಕಾರಣದಿಂದಾಗಿಯೇ ಆಕೆಮಿನಿಡ್ ದೊರೆ 1ನೆಯ ಡೇರಿಯಸ್ (ಕ್ರಿ.ಪೂ. 522-485) ತನ್ನ ಪ್ರಸಿದ್ಧ ತ್ರಿಭಾಷಾ ಶಾಸನವನ್ನು ಇಲ್ಲಿಯ ಬಂಡೆಯ ಕಡಿದಾದ ಪಾಶ್ರ್ವದಲ್ಲಿ ಕೊರೆಯಿಸಿದ. ಇಲ್ಲಿರುವ ಶಿಲ್ಪಗಳಲ್ಲಿ ಡೇರಿಯಸನ ಒಂದು ಉಬ್ಬುಗೆತ್ತನೆ ತುಂಬ ಅಕರ್ಷಕವಾಗಿದೆ. ಈ ಶಾಸನವನ್ನು ಬ್ಯಾಬಿಲೋನಿಯನ್, ಎಲಾಮೈಟ್ ಹಾಗೂ ಪೂರ್ವ ಪರ್ಷಿಯನ್ ಭಾಷೆಗಳಲ್ಲಿ ಬರೆಯಲಾಗಿದೆ. ಇದು ಕ್ಯೂನಿಫಾರ್ಮ ಲಿಪಿಯಲ್ಲಿದೆ. ಎರಡನೆಯ ಕ್ಯಾಂಬೈಸಸನ ಅನಂತರ ಸಿಂಹಾಸನವನ್ನು ಆಕ್ರಮಿಸಿಕೊಳ್ಳಲು ಹವಣಿಸಿ ದಂಡೆತ್ತಿ ಬಂದ ಗೌಮಾಟನನ್ನು ಯುದ್ಧದಲ್ಲಿ ಡೇರಿಯಸ್ ಸೋಲಿಸಿ ಸಿಂಹಾಸನವನ್ನೇರಿದ ಸಂಗತಿಯನ್ನು ಸಾರುವುದು ಈ ಶಾಸನದ ಮುಖ್ಯವಾಗಿ ಉದ್ದೇಶ. ಪರ್ಷಿಯನ್ ಸಾಮ್ರಾಜ್ಯವನ್ನು ಸತ್ರಪಿಗಳಾಗಿ (ಪ್ರಾಂತ್ಯ) ವಿಂಗಡಿಸಿದ್ದನ್ನೂ ಇಲ್ಲಿ ಹೇಳಲಾಗಿದೆ. 

1835ರಲ್ಲಿ ಸರ್.ಹೆನ್ರಿ ಕ್ರೆಸ್ವಿಕ್ ರಾಲಿನ್ಸನ್ ಎಂಬ ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿ ಸುಮಾರು 518 ಮೀ ಎತ್ತರ ಶಿಲೆಯನ್ನು ಹತ್ತಿ ಶಾಸನದ ಅಚ್ಚನ್ನು ತೆಗೆದುಕೊಂಡ. 1846ರ ಹೊತ್ತಿಗೆ ಅವನು ಶಾಸನದ ಪರ್ಷಿಯನ್ ಭಾಷೆಯ ಪಾಠವನ್ನು ಓದಲು ಸಾಧ್ಯವಾಯಿತು. ರಾಲಿನ್ಸನ್ ಇದನ್ನು 1849ರಲ್ಲಿ ಪ್ರಕಟಿಸಿದ. ಎಲಾಮೈಟ್ ಮತ್ತು ಬ್ಯಾಬಿಲೋನಿಯನ್ ಪಾಠಗಳನ್ನೂ ಕಾಲಕ್ರಮದಲ್ಲಿ ಓದಲಾಯಿತು. ಪ್ರಪಂಚದ ಬೇರೆ ಬೇರೆ ದೇಶಗಳ ಪುರಾತತ್ವಜ್ಞರು ಇದರಲ್ಲಿ ಆಸಕ್ತಿ ತೋರಿಸಿದರು. ಅನೇಕ ವಿದ್ವಾಂಸರು ಬಿಸಿತೂನಿಗೆ ಬಂದು ಶಾಸನವನ್ನು ಪುನಃ ಓದಿ ತಿದ್ದುಪಾಟುಗಳನ್ನು ಸೂಚಿಸಿದರು. ಈ ಶಾಸನವನ್ನು ಕ್ರಿ.ಪೂ. 522-520ರಲ್ಲಿ ಬರೆದಿರಬಹುದೆಂಬುದು ವಿದ್ವಾಂಸರ ಊಹೆಯಾಗಿದೆ. 						
(ಹೆಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ